ನವದೆಹಲಿ/ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಡುವಿನ ಉಪಹಾರ ಕೂಟದ ಬಗ್ಗೆ ರಾಜಕೀಯ ವಲಯದಲ್ಲಿ ಚರ್ಚೆ ಮುಂದುವರಿದಿದ್ದು, ಬಿಜೆಪಿ ನಾಯಕರು ಇದನ್ನು ವ್ಯಂಗ್ಯವಾಗಿ ಟೀಕಿಸಿದ್ದಾರೆ.
“ಮುಖ್ಯಮಂತ್ರಿ–ಉಪಮುಖ್ಯಮಂತ್ರಿ ನಡುವಿನ ಉಪಹಾರ ಸಭೆ ಕೇವಲ ಟೀಸರ್ ಮಾತ್ರ. ನಿಜವಾದ ಸಿನಿಮಾ ಇನ್ನೂ ಬಾಕಿಯಿದೆ. ಅಭಿ ಬಾಕಿ ಹೈ…” ಎಂದು ಮಾಜಿ ಮುಖ್ಯಮಂತ್ರಿ ಮತ್ತು ಬಿಜೆಪಿ ಸಂಸದ ಬಸವರಾಜ ಬೊಮ್ಮಾಯಿ ಅಣಕವಾಡಿದ್ದಾರೆ.
ನವದೆಹಲಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಇಬ್ಬರೂ ಉಪಹಾರಕ್ಕೆ ಸಮಯ ಕೊಡುತ್ತಿದ್ದರೆ ರಾಜ್ಯದ ಜನರ ಅಭಿವೃದ್ಧಿ ಯಾರು ನೋಡಿಕೊಳ್ಳುತ್ತಾರೆ? ಒಬ್ಬರು ಕುರ್ಚಿಯತ್ತ, ಇನ್ನೊಬ್ಬರು ಕುರ್ಚಿಯನ್ನು ಉಳಿಸಿಕೊಂಡು ಹೋಗಲು ಯತ್ನಿಸುವ ರಾಜಕೀಯವೇ ನಡೆಯುತ್ತಿದೆ” ಎಂದು ಟೀಕಿಸಿದರು.
ಕಾಂಗ್ರೆಸ್ ಒಳಜಗಳದ ಬಗ್ಗೆ ಪ್ರತಿಕ್ರಿಯಿಸಿದ ಬೊಮ್ಮಾಯಿ, “ಕಾಂಗ್ರೆಸ್ ಹೈಕಮಾಂಡ್ ಎಲ್ಲಿದೆ? ಹೈಕಮಾಂಡ್ ಎಂದರೆ ಯಾರು? ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಾವೇ ‘ನಾನು ಹೈಕಮಾಂಡ್ ಅಲ್ಲ’ ಎಂದು ಹೇಳಿದಾಗ ಬಾಕಿ ಅರ್ಥವೇನು? ಇದು ಸರಳವಾಗಿ ಕುಟುಂಬದ ವಿಚಾರ” ಎಂದರು.




