‘ತಂದೆಯ ಮೈಕ್ರೋಪ್ಲಾಸ್ಟಿಕ್..’ ಹೆಣ್ಣು ಮಕ್ಕಳಲ್ಲಿ ಮಧುಮೇಹದ ಅಪಾಯ ಹೆಚ್ಚಳ?

ನವದೆಹಲಿ: ತಂದೆಯು ಮೈಕ್ರೋಪ್ಲಾಸ್ಟಿಕ್‌ಗೆ ಒಡ್ಡಿಕೊಳ್ಳುವುದರಿಂದ ಮಕ್ಕಳಲ್ಲಿ ಚಯಾಪಚಯ ಕ್ರಿಯೆಯಲ್ಲಿ ಅಡಚಣೆ ಉಂಟಾಗುವ ಸಾಧ್ಯತೆ ಇದ್ದು, ವಿಶೇಷವಾಗಿ ಹೆಣ್ಣು ಮಕ್ಕಳಲ್ಲಿ ಮಧುಮೇಹ ಬೆಳೆಯುವ ಅಪಾಯ ಹೆಚ್ಚಾಗಬಹುದು ಎಂದು ಪ್ರಾಣಿಗಳ ಅಧ್ಯಯನವೊಂದು ಎಚ್ಚರಿಕೆ ನೀಡಿದೆ.

ಮೈಕ್ರೋಪ್ಲಾಸ್ಟಿಕ್‌ಗಳು ಗ್ರಾಹಕ ಉತ್ಪನ್ನಗಳು ಹಾಗೂ ಕೈಗಾರಿಕಾ ತ್ಯಾಜ್ಯಗಳ ವಿಭಜನೆಯಿಂದ ಉಂಟಾಗುವ, 5 ಮಿಲಿಮೀಟರ್‌ಗಿಂತ ಚಿಕ್ಕದಾದ ಪ್ಲಾಸ್ಟಿಕ್ ಕಣಗಳಾಗಿವೆ. ಇವು ಈಗಾಗಲೇ ಮಾನವ ಸಂತಾನೋತ್ಪತ್ತಿ ವ್ಯವಸ್ಥೆಗಳಲ್ಲಿ ಪತ್ತೆಯಾಗಿರುವುದು ವಿಜ್ಞಾನಿಗಳ ಆತಂಕಕ್ಕೆ ಕಾರಣವಾಗಿದೆ.

ಜರ್ನಲ್ ಆಫ್ ದಿ ಎಂಡೋಕ್ರೈನ್ ಸೊಸೈಟಿಯಲ್ಲಿ ಪ್ರಕಟವಾದ ಈ ಅಧ್ಯಯನವು, ತಂದೆಯ ಮೈಕ್ರೋಪ್ಲಾಸ್ಟಿಕ್ ಒಡ್ಡಿಕೊಳ್ಳುವಿಕೆ ಮತ್ತು ಮುಂದಿನ ಪೀಳಿಗೆಯ ದೀರ್ಘಕಾಲೀನ ಆರೋಗ್ಯದ ನಡುವಿನ ಸಂಬಂಧವನ್ನು ವಿವರಿಸುವ ಮೊದಲ ಸಂಶೋಧನೆ ಎಂದು ಹೇಳಲಾಗಿದೆ.

ಅಧ್ಯಯನದ ನೇತೃತ್ವ ವಹಿಸಿದ್ದ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯ (ರಿವರ್‌ಸೈಡ್)ದ ವೈದ್ಯಕೀಯ ಶಾಲೆಯ ಬಯೋಮೆಡಿಕಲ್ ವಿಜ್ಞಾನಗಳ ಪ್ರಾಧ್ಯಾಪಕ ಚಾಂಗ್‌ಚೆಂಗ್ ಝೌ, “ಪೋಷಕರ ಪರಿಸರ ಸ್ಥಿತಿಗಳು ಮಕ್ಕಳ ಆರೋಗ್ಯದ ಮೇಲೆ ಹೇಗೆ ಪರಿಣಾಮ ಬೀರುತ್ತವೆ ಎಂಬುದನ್ನು ಈ ಸಂಶೋಧನೆ ಹೊಸ ದೃಷ್ಟಿಕೋನದಿಂದ ಬೆಳಕಿಗೆ ತರುತ್ತದೆ” ಎಂದಿದ್ದಾರೆ.

ಅಧ್ಯಯನಕ್ಕಾಗಿ ಸಂಶೋಧಕರು ಗಂಡು ಇಲಿಗಳನ್ನು ಮೈಕ್ರೋಪ್ಲಾಸ್ಟಿಕ್‌ಗಳಿಗೆ ಒಡ್ಡಿ, ನಂತರ ಅವುಗಳ ಸಂತತಿಯನ್ನು ಪರಿಶೀಲಿಸಿದರು. ಎಲ್ಲಾ ಇಲಿಗಳಿಗೆ ಒಂದೇ ರೀತಿಯ ಹೆಚ್ಚಿನ ಕೊಬ್ಬಿನ ಆಹಾರ ನೀಡಿದರೂ, ಮೈಕ್ರೋಪ್ಲಾಸ್ಟಿಕ್‌ಗೆ ಒಡ್ಡಿಕೊಂಡ ತಂದೆಯ ಹೆಣ್ಣು ಸಂತತಿಯು ರಕ್ತದ ಸಕ್ಕರೆ ಹೆಚ್ಚಳ, ಮಧುಮೇಹ ಲಕ್ಷಣಗಳು ಮತ್ತು ಸ್ನಾಯು ದ್ರವ್ಯರಾಶಿ ಇಳಿಕೆಯನ್ನು ತೋರಿಸಿದವು ಎಂದು ವರದಿ ತಿಳಿಸಿದೆ.

ಹೆಣ್ಣು ಸಂತತಿಯ ಯಕೃತ್ತಿನಲ್ಲಿ ಉರಿಯೂತ ಮತ್ತು ಮಧುಮೇಹಕ್ಕೆ ಸಂಬಂಧಿಸಿದ ಜೀನ್‌ಗಳ ಚಟುವಟಿಕೆ ಹೆಚ್ಚಾಗಿರುವುದು ಕಂಡುಬಂದಿದ್ದು, ಗಂಡು ಸಂತತಿಯಲ್ಲಂತೂ ಈ ಬದಲಾವಣೆಗಳು ಗೋಚರಿಸಲಿಲ್ಲ. ಗಂಡು ಸಂತತಿಯು ಮಧುಮೇಹಕ್ಕೆ ಒಳಗಾಗದಿದ್ದರೂ, ಕೊಬ್ಬಿನ ದ್ರವ್ಯರಾಶಿಯಲ್ಲಿ ಸ್ವಲ್ಪ ಇಳಿಕೆ ಕಂಡುಬಂದಿದೆ ಎಂದು ಸಂಶೋಧಕರು ತಿಳಿಸಿದ್ದಾರೆ.

“ಈ ಲಿಂಗ-ನಿರ್ದಿಷ್ಟ ಪರಿಣಾಮಗಳ ನಿಖರ ಕಾರಣಗಳು ಇನ್ನೂ ಸ್ಪಷ್ಟವಾಗಿಲ್ಲ. ಆದರೆ ಪ್ಲಾಸ್ಟಿಕ್ ಮಾಲಿನ್ಯದ ಪರಿಣಾಮವು ವ್ಯಕ್ತಿಗೆ ಮಾತ್ರ ಸೀಮಿತವಾಗದೆ, ಮುಂದಿನ ಪೀಳಿಗೆಯ ಆರೋಗ್ಯದ ಮೇಲೂ ದೀರ್ಘಕಾಲೀನ ಪರಿಣಾಮ ಬೀರುವ ಸಾಧ್ಯತೆ ಇದೆ,” ಎಂದು ಝೌ ಎಚ್ಚರಿಸಿದರು.

ಮಕ್ಕಳನ್ನು ಹೊಂದಲು ಯೋಜಿಸುತ್ತಿರುವ ಪುರುಷರು, ತಮ್ಮ ಹಾಗೂ ಭವಿಷ್ಯದ ಮಕ್ಕಳ ಆರೋಗ್ಯದ ದೃಷ್ಟಿಯಿಂದ ಮೈಕ್ರೋಪ್ಲಾಸ್ಟಿಕ್‌ಗಳಂತಹ ಹಾನಿಕಾರಕ ಪರಿಸರ ಅಂಶಗಳಿಗೆ ಒಡ್ಡಿಕೊಳ್ಳುವುದನ್ನು ಕಡಿಮೆ ಮಾಡುವ ಬಗ್ಗೆ ಗಂಭೀರವಾಗಿ ಚಿಂತಿಸಬೇಕು ಎಂದು ಸಂಶೋಧಕರು ಸಲಹೆ ನೀಡಿದ್ದಾರೆ.

Leave a Reply

Your email address will not be published. Required fields are marked *