RSS ಕಾರ್ಯಕ್ರಮಗಳಿಗೆ ಅಂಕುಶ, ಏರ್ಪೋರ್ಟ್’ನಲ್ಲಿ ನಮಾಜ್ ಮಾಡಲು ಅವಕಾಶ, ಬಿಜೆಪಿ ನಾಯಕರ ಆಕ್ರೋಶ

ಬೆಂಗಳೂರು: ರಾಷ್ಟ್ರೀಯ ಸ್ವಯಂಸೇವಕ ಸಂಘದ ಚಟುವಟಿಕೆಗಳಿಗೆ ಅಂಕುಶ ಹಾಕಲು ಸಚಿವ ಪ್ರಿಯಾಂಕ್ ಖರ್ಗೆ ಪ್ರಯತ್ನ ನಡೆಸಿರುವ ವಿಚಾರ ಭಾರೀ ವಿವಾದಕ್ಕೆ ಎಡೆಮಾಡಿಕೊಟ್ಟಿದೆ. ಆದರೆ, ಮತ್ತೊಂದೆಡೆ ಏರ್ಪೋರ್ಟ್ ಆವರಣದಲ್ಲಿ ಸಾಮೂಹಿಕ ನಮಾಜ್ ನಡೆಸಲು ಅವಕಾಶ ನೀಡಲಾಗಿದೆ ಎಂದು ಬಿಜೆಪಿ ಆರೋಪಿಸಿದೆ.
ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ ಎನ್ನಲಾದ ಸಾಮೂಹಿಕ ನಮಾಜ್ ಬಗ್ಗೆ ಪ್ರತಿಪಕ್ಷ ನಾಯಕರಾದ ಆರ್.ಅಶೋಕ್, ಛಲವಾದಿ ನಾರಾಯಣ ಸ್ವಾಮಿ ಸಹಿತ ಬಿಜೆಪಿ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಂತಹ ಘಟನೆಗಳಿಗೆ ರಾಜ್ಯ ಸರ್ಕಾರ ಹೊಣೆ ಎಂದು ಅವರು ದೂರಿದ್ದಾರೆ.


ಇನ್ನೊಂದೆಡೆ, ಸಾಮಾಜಿಕ ಮಾಧ್ಯಮ ‘X’ನಲ್ಲಿ ಪ್ರತಿಕ್ರಿಯಿಸಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ‘ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಾಮೂಹಿಕ ನಮಾಜ್ ಮಾಡುತ್ತಿರುವ ದೃಶ್ಯವನ್ನು ಮಾಧ್ಯಮಗಳು ಬಿತ್ತರಿಸಿವೆ. ಸಾರ್ವಜನಿಕ ಸ್ಥಳಗಳಲ್ಲಿ ನಮಾಜ್ ಮಾಡಲು ಇವರಿಗೆ ಅನುಮತಿ ಕೊಟ್ಟಿದ್ದು ಯಾರು? ಮುಸಲ್ಮಾನ ಬಾಹುಳ್ಯ ದೇಶಗಳಲ್ಲೇ ಸಾರ್ವಜನಿಕ ಸ್ಥಳಗಳಲ್ಲಿ ನಮಾಜ್ ನಿಷೇದಿಸಿರುವಾಗ ನಮ್ಮ ದೇಶದಲ್ಲಿ ಏಕೆ ಅನುಮತಿ ಕೊಡಬೇಕು?’ ಎಂದು ಪ್ರಶ್ನಿಸಿದ್ದಾರೆ.

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪಥಸಂಚಲನಕ್ಕೆ ತಹಸೀಲ್ದಾರ್ ಇಂದ ಹಿಡಿದು ಡಿ.ಸಿ., ಎಸ್ಪಿ ವರೆಗೂ ಅನುಮತಿ ಪಡೆಯಬೇಕೆಂದು ಆದೇಶ ಹೊರಡಿಸುವ ರಾಜ್ಯ ಸರ್ಕಾರಕ್ಕೆ ಸಾರ್ವಜನಿಕ ಸ್ಥಳಗಳಲ್ಲಿ ನಮಾಜ್ ಮಾಡಬಾರದು ಎಂದು ಹೇಳುವುದಕ್ಕೆ ಧೈರ್ಯವಿಲ್ಲವೇ ? ಎಂದು ಯತ್ನಾಳ್ ಪ್ರಶ್ನಿಸಿದ್ದಾರೆ.

ಸಾರ್ವಜನಿಕರ ಸುಗಮ ಸಂಚಾರಕ್ಕೆ ಅಡ್ಡಿ ಪಡಿಸಿದ ಹಿನ್ನೆಲೆಯಲ್ಲಿ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ನಮಾಜ್ ಮಾಡಿದವರ ವಿರುದ್ದ ಸರ್ಕಾರ ತಕ್ಷಣವೇ ಕ್ರಮ ಕೈಗೊಳ್ಳಲಿ ಎಂದು ಅವರು ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *