ತಂತ್ರಜ್ಞಾನ ಯುಗದಲ್ಲಿ ‘ಡಿಜಿಟಲ್ ಡಿಟಾಕ್ಸ್’ ಮಾದರಿ ಹೆಜ್ಜೆ

ಬೆಳಗಾವಿ: ತಂತ್ರಜ್ಞಾನ ಜೀವನದ ಅವಿಭಾಜ್ಯ ಅಂಗವಾಗುತ್ತಿರುವ ಈ ಡಿಜಿಟಲ್ ಯುಗದಲ್ಲಿ, ಅದರ ಅತಿಯಾದ ಬಳಕೆಯಿಂದ ಉಂಟಾಗುವ ದುಷ್ಪರಿಣಾಮಗಳನ್ನು ತಗ್ಗಿಸಲು ಬೆಳಗಾವಿ ಜಿಲ್ಲೆಯ ಹಲಗಾ ಗ್ರಾಮಪಂಚಾಯತಿ ಕೈಗೊಂಡಿರುವ ವಿನೂತನ ಪ್ರಯತ್ನ ಎಲ್ಲೆಡೆ ಪ್ರಶಂಸೆಗೆ ಪಾತ್ರವಾಗಿದೆ.

ಆಧುನಿಕತೆಯೊಂದಿಗೆ ಜೀವನಶೈಲಿ ಮತ್ತು ಸಾಮಾಜಿಕ ಸಂಬಂಧಗಳಲ್ಲಿ ಮಹತ್ತರ ಬದಲಾವಣೆಗಳು ಕಂಡುಬರುತ್ತಿವೆ. ಡಿಜಿಟಲೀಕರಣದ ಲಾಭಗಳನ್ನು ಸ್ವೀಕರಿಸುವ ಜೊತೆಗೆ ಸಾಮಾಜಿಕ ಮೌಲ್ಯಗಳು ಮತ್ತು ಮಾನವೀಯ ಸಂಬಂಧಗಳನ್ನು ಉಳಿಸಿಕೊಳ್ಳುವ ಅಗತ್ಯವಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಹದಿಹರೆಯದ ಮಕ್ಕಳು ಹಾಗೂ ಯುವಕರು ಮಿತಿಮೀರಿದಂತೆ ಮೊಬೈಲ್ ಫೋನ್ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಮುಳುಗುತ್ತಿರುವುದು, ಓದು ಹಾಗೂ ಸಾಮಾಜಿಕ ಒಡನಾಟದಿಂದ ದೂರ ಸರಿಯುತ್ತಿರುವುದು ಗಂಭೀರ ಚಿಂತೆಗೆ ಕಾರಣವಾಗಿದೆ.

ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ಹಲಗಾ ಗ್ರಾಮಪಂಚಾಯತಿ ಪ್ರತಿದಿನ ಸಂಜೆ 7 ಗಂಟೆಗೆ ಸೈರನ್ ಮೊಳಗಿಸುವ ವ್ಯವಸ್ಥೆಯನ್ನು ಜಾರಿಗೆ ತಂದಿದೆ. ಸೈರನ್ ಮೊಳಗುತ್ತಿದ್ದಂತೆ ಮಕ್ಕಳಿಗೆ ಪಠ್ಯ ಪುಸ್ತಕ ಅಭ್ಯಾಸ ಕಡ್ಡಾಯವಾಗಿದ್ದು, ಪೋಷಕರೂ ಟಿವಿ ಹಾಗೂ ಮೊಬೈಲ್‌ಗಳಿಗೆ ವಿರಾಮ ನೀಡಿ ಮಕ್ಕಳ ಓದು, ಸಾಮಾಜಿಕ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಿದ್ದಾರೆ.

ಈ ಕ್ರಮದಿಂದ ಮೊಬೈಲ್ ಮತ್ತು ಟಿವಿ ಬಳಕೆಗೆ ತಾತ್ಕಾಲಿಕ ವಿರಾಮ ಸಿಗುವುದರ ಜೊತೆಗೆ, ಕುಟುಂಬ ಸದಸ್ಯರ ನಡುವಿನ ಸಂವಾದ ಮತ್ತು ಬಾಂಧವ್ಯ ವೃದ್ಧಿಯಾಗುತ್ತಿದೆ. ಮಕ್ಕಳು ಓದಿನತ್ತ ಮರಳಿದ್ದು, ಹಿರಿಯರು ಕೂಡ ಪರಸ್ಪರ ಸಂಪರ್ಕ ಹೆಚ್ಚಿಸಿಕೊಂಡಿದ್ದಾರೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ತಂತ್ರಜ್ಞಾನವನ್ನು ಸಂಪೂರ್ಣ ತಳ್ಳಿಹಾಕದೆ, ಅದರ ಬಳಕೆಗೆ ಸಮತೋಲನ ತಂದು ಸಾಮಾಜಿಕ ಜವಾಬ್ದಾರಿಗಳನ್ನು ಬಲಪಡಿಸುವ ಹಲಗಾ ಗ್ರಾಮಪಂಚಾಯತಿಯ ಈ ‘ಡಿಜಿಟಲ್ ಡಿಟಾಕ್ಸ್’ ಪ್ರಯತ್ನ ಇತರ ಗ್ರಾಮಗಳಿಗೆ ಮಾದರಿಯಾಗಲಿದೆ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.

Leave a Reply

Your email address will not be published. Required fields are marked *