ರಿಯಾಲಿಟಿ ಶೋ ವೇದಿಕೆಯಿಂದ ವಿಧಾನಸಭೆಯವರೆಗೆ.. ಯಾರು ಈ ಮೈಥಿಲಿ?

ಪಾಟ್ನಾ: ಬಿಹಾರ ಚುನಾವಣೆಯಲ್ಲಿ NDA ಐತಿಹಾಸಿಕ ಗೆಲುವು ಸಾಧಿಸಿದ ಸಂದರ್ಭದಲ್ಲಿ, ಫಲಿತಾಂಶದ ಮೆರಗು ಹೆಚ್ಚಿಸಿದ ಹೆಸರುಗಳಲ್ಲಿ ಜಾನಪದ ಗಾಯಕಿ ಮೈಥಿಲಿ ಠಾಕೂರ್ ಮುಂಚೂಣಿಯಲ್ಲಿದ್ದಾರೆ. ಕೇವಲ 25 ವರ್ಷ ವಯಸ್ಸಿನ ಅವರು, ದೇಶದ ಅತ್ಯಂತ ಕಿರಿಯ ಶಾಸಕಿ ಎಂಬ ಗೌರವಕ್ಕೆ ಪಾತ್ರರಾಗಿದ್ದು, ರಾಜಕೀಯ ವಲಯದಲ್ಲಿ ದೊಡ್ಡ ಕುತೂಹಲದ ಕೇಂದ್ರಬಿಂದುವಾಗಿದ್ದಾರೆ.

ಬಿಜೆಪಿ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸುವುದಕ್ಕೂ ಒಂದು ದಿನ ಮೊದಲು ಪಕ್ಷಕ್ಕೆ ಸೇರ್ಪಡೆಯಾದ ಮೈಥಿಲಿ, ಅಲಿನಗರ ಕ್ಷೇತ್ರದಲ್ಲಿ ಕಣಕ್ಕಿಳಿದು 12 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಿದರು. ಯುವಜನತೆಯ ಸೆಳೆತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಪಡೆದಿದ್ದ ಅಪಾರ ಅಭಿಮಾನ – ಇವೆಲ್ಲವು ಮತಯಂತ್ರದಲ್ಲೂ ಪ್ರತಿಫಲಿಸಿದೆ.

ಯಾರು ಈ ಮೈಥಿಲಿ?

ಮೈಥಿಲಿ ಠಾಕೂರ್ ಜಾನಪದ ಗಾಯಕಿ. 2000ರ ಜುಲೈ 25ರಂದು ಮಧುಬನಿಯಲ್ಲಿ ಜನಿಸಿದ ಮೈಥಿಲಿ, ಬಾಲ್ಯದಲ್ಲೇ ದೆಹಲಿಯ ನಜಾಫ್‌ಗಢಕ್ಕೆ ಸ್ಥಳಾಂತರಗೊಂಡಿದ್ದರು. ತಂದೆಯ ಉದ್ಯೋಗ ಕಳೆದುಕೊಂಡ ನಂತರ ಕುಟುಂಬ ಎದುರಿಸಿದ ಆರ್ಥಿಕ ಸಂಕಷ್ಟಗಳಲ್ಲಿ, ಶಾಸ್ತ್ರೀಯ ಮತ್ತು ಜಾನಪದ ಸಂಗೀತ ಪರಿಚಯವೇ ಅವರಿಗೆ ಬಲವಾಯ್ತು. ಶಾಸ್ತ್ರೀಯ ಗಾಯಕನಾದ ತಂದೆಯೇ ಅವರ ಮೊದಲ ಗುರು. ಸರಿಗಮಪ ಲಿಟಲ್ ಚಾಂಪ್ಸ್, ಇಂಡಿಯನ್ ಐಡಲ್ ಜೂನಿಯರ್ ಸೇರಿದಂತೆ ಹಲವಾರು ರಿಯಾಲಿಟಿ ಶೋಗಳ ಮೂಲಕ ಮನೆಮಾತಾದ ಮೈಥಿಲಿ, ನಂತರ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಗಾಯನದ ಮೂಲಕ ಲಕ್ಷಾಂತರ ಅಭಿಮಾನಿಗಳನ್ನು ಗಳಿಸಿದ್ದರು.

ಕೇವಲ 25 ವರ್ಷದ ಅಭ್ಯರ್ಥಿಗೆ ಟಿಕೆಟ್ ನೀಡಿದ್ದಕ್ಕೆ ಕೆಲವರು ಅಸಮಾಧಾನ ವ್ಯಕ್ತಪಡಿಸಿದರೂ, ಮೈಥಿಲಿ ಮೊದಲ ಬಾರಿಗೆ ಕಣಕ್ಕಿಳಿದ ಚುನಾವಣೆಯಲ್ಲೇ ಜಯ ಸಾಧಿಸಿ ಎಲ್ಲ ಅನುಮಾನಗಳಿಗೆ ತೆರೆ ಎಳೆದಿದ್ದಾರೆ. ಆರ್‌ಜೆಡಿ ಅಭ್ಯರ್ಥಿಯನ್ನು ಮಣಿಸಿ, ಅವರು ಬಿಹಾರದ ಅತೀ ಕಿರಿಯ ಶಾಸಕಿ ಎಂಬ ಮೆರಗು ಕೂಡ ಪಡೆದುಕೊಂಡಿದ್ದಾರೆ.

ಹೊಸ ಮುಖಗಳಿಗೆ ಅವಕಾಶ ನೀಡುವ BJPಯ ಚುನಾವಣಾ ಪ್ರಯೋಗಗಳಲ್ಲಿ ಮೈಥಿಲಿ ಠಾಕೂರ್‌ರನ್ನು ಕಣಕ್ಕಿಳಿಸುವುದು ಮಹತ್ವದ ಹೆಜ್ಜೆಯೊಂದಾಗಿ ಪರಿಣಮಿಸಿದೆ. ರಿಯಾಲಿಟಿ ಶೋ ವೇದಿಕೆಯಿಂದ ವಿಧಾನಸಭೆಯವರೆಗೆ—ಮೈಥಿಲಿಯ ಈ ಪಯಣ ಇದೀಗ ರಾಷ್ಟ್ರೀಯ ರಾಜಕೀಯದಲ್ಲಿ ಚರ್ಚೆಯ ವಿಷಯವಾಗಿದೆ.

Leave a Reply

Your email address will not be published. Required fields are marked *