ಮೈಸೂರು ನಗರ ಸಾರಿಗೆಯಲ್ಲಿ ಧ್ವನಿ ಸ್ಪಂದನ ಯೋಜನೆಗೆ KSRTCಗೆ ‘ಸ್ವಯಂ ಆಕ್ಸೆಸಿಬಿಲಿಟಿ ಪ್ರಶಸ್ತಿ 2025

ನವದೆಹಲಿ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (ಕೆಎಸ್‌ಆರ್‌ಟಿಸಿ) ಮೈಸೂರು ನಗರ ಸಾರಿಗೆಯಲ್ಲಿ ಜಾರಿಗೆ ತಂದ ‘ಧ್ವನಿ ಸ್ಪಂದನ – ಆನ್‌ಬೋರ್ಡ್ ಬಸ್ ಐಡೆಂಟಿಫಿಕೇಶನ್ ಮತ್ತು ನ್ಯಾವಿಗೇಶನ್ ಸಿಸ್ಟಮ್’ ಎಂಬ ನೂತನ ಯೋಜನೆ ದೇಶದ ಮೊದಲ ಮಾದರಿ ಯೋಜನೆಯಾಗಿ ಗುರುತಿಸಿಕೊಂಡಿದ್ದು, ‘ಸ್ವಯಂ ಆಕ್ಸೆಸಿಬಿಲಿಟಿ ಪ್ರಶಸ್ತಿ–2025’ ಅನ್ನು ಪಡೆದುಕೊಂಡಿದೆ.

ಈ ಪ್ರಶಸ್ತಿಯನ್ನು ರಾಷ್ಟ್ರೀಯ ಮಾಹಿತಿ ಕೇಂದ್ರದ (NIC) ಉಪ ಮಹಾನಿರ್ದೇಶಕ ಪ್ರಶಾಂತ್ ಕುಮಾರ್ ಮಿತ್ತಲ್ ಹಾಗೂ ಸ್ವಯಂ ಸಂಸ್ಥೆಯ ಸ್ಥಾಪಕ ಸೈಮು ಜಿಂದಾಲ್ ಅವರು ಕೆಎಸ್‌ಆರ್‌ಟಿಸಿಯ ಮಂಡ್ಯ ವಿಭಾಗದ ನಿಯಂತ್ರಣಾಧಿಕಾರಿ ಶರಣ್ ಬಸವರಾಜ ಕೆ.ಎಂ. ಮತ್ತು ಉಪ ಮುಖ್ಯ ಗಣಕ ವ್ಯವಸ್ಥಾಪಕಿ ಸುಧಾರಾಣಿ ಆರ್. ಅವರಿಗೆ ಪ್ರದಾನ ಮಾಡಿದರು.

‘ಸ್ವಯಂ’ ಸಂಸ್ಥೆಯು ಅಂತರರಹಿತ ವಿನ್ಯಾಸ ಹಾಗೂ ಒಳಗೊಳ್ಳುವಿಕೆಯ ಕ್ಷೇತ್ರದಲ್ಲಿ ಮಾದರಿಯಾಗಿರುವ ಸಂಸ್ಥೆಗಳನ್ನು ಗೌರವಿಸುವ ಉದ್ದೇಶದಿಂದ ಈ ಪ್ರಶಸ್ತಿಯನ್ನು ನೀಡುತ್ತದೆ. 2025ನೇ ವರ್ಷ ಸಂಸ್ಥೆಯ 25ನೇ ವಾರ್ಷಿಕೋತ್ಸವವಾಗಿದ್ದು, ಜಾಗತಿಕ ಮಟ್ಟದಲ್ಲಿ 25 ವರ್ಷಗಳ ಸೇವೆಯನ್ನು ಆಚರಿಸುತ್ತಿದೆ.

ಮೈಸೂರು ನಗರ ಬಸ್ಸುಗಳಲ್ಲಿ ಜಾರಿಗೊಂಡಿರುವ ‘ಧ್ವನಿ ಸ್ಪಂದನ’ ಯೋಜನೆ, ದೃಷ್ಟಿ ಸಮಸ್ಯೆಯುಳ್ಳ ಪ್ರಯಾಣಿಕರ ಸ್ವತಂತ್ರ ಹಾಗೂ ಭದ್ರ ಚಲನವಲನಕ್ಕೆ ಸಹಾಯವಾಗುವ ಉದ್ದೇಶ ಹೊಂದಿದೆ. ಈ ವ್ಯವಸ್ಥೆಯನ್ನು ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ) ದೆಹಲಿಯ ರೈಸ್‌ಡ್ ಲೈನ್ಸ್ ಫೌಂಡೇಶನ್ ಅಭಿವೃದ್ಧಿಪಡಿಸಿದೆ.

ಈ ತಂತ್ರಜ್ಞಾನವು ಬಳಕೆದಾರರಿಗೆ ಬರುತ್ತಿರುವ ಬಸ್‌ಗಳನ್ನು ಗುರುತಿಸಲು ಮತ್ತು ಧ್ವನಿ ಆಧಾರಿತ ಸೂಚನೆಗಳ ಮೂಲಕ ಬಸ್ ಪ್ರವೇಶದ ಸ್ಥಳವನ್ನು ಪತ್ತೆಹಚ್ಚಲು ನೆರವಾಗುತ್ತದೆ. ಈಗಾಗಲೇ 200 ಕ್ಕೂ ಹೆಚ್ಚು ನಗರ ಬಸ್ಸುಗಳಲ್ಲಿ ಈ ವ್ಯವಸ್ಥೆ ಅಳವಡಿಸಲಾಗಿದೆ. ಜೊತೆಗೆ 400 ಕ್ಕೂ ಹೆಚ್ಚು ದೃಷ್ಟಿ ವಿಕಲ ಬಳಕೆದಾರರಿಗೆ ತರಬೇತಿ ನೀಡಲಾಗಿದೆ.

ಯೋಜನೆಯಿಂದ ದೃಷ್ಟಿ ವಿಕಲ ಪ್ರಯಾಣಿಕರ ಪ್ರಯಾಣದ ಅವಲಂಬನೆ ಗಣನೀಯವಾಗಿ ಕಡಿಮೆಯಾಗಿದ್ದು, ಅವರ ಆತ್ಮವಿಶ್ವಾಸ, ಭದ್ರತೆ ಮತ್ತು ಸ್ವಾತಂತ್ರ್ಯದಲ್ಲಿ ಮಹತ್ವದ ಏರಿಕೆ ಕಂಡುಬಂದಿದೆ.

ಈ ಯೋಜನೆಗೆ ಜರ್ಮನಿಯ ಡಾಯಿಚೆ ಗೆಸೆಲ್‌ಶಾಫ್ಟ್ ಫ್ಯೂರ್ ಇಂಟರ್ನ್ಯಾಷನಾಲೆ ಜುಸಮ್ಮೆನಾರ್ಬೈಟ್ (GIZ) GmbH ಸಂಸ್ಥೆಯು ತಾಂತ್ರಿಕ ಸಹಕಾರ ನೀಡಿದೆ. ಇದು SUM–ACA ಯೋಜನೆಯ ಅಡಿಯಲ್ಲಿ, ಎಲ್ಲರಿಗೂ ಸಮಾನ ಅವಕಾಶದ ನಗರ ಸಾರಿಗೆಯ ಅಭಿವೃದ್ಧಿಯ ಗುರಿಯನ್ನು ಹೊಂದಿದೆ.

Leave a Reply

Your email address will not be published. Required fields are marked *