RSS ನೋಂದಣಿಯಾಗಿಲ್ಲ, ಟ್ಯಾಕ್ಸ್ ಕಟ್ಟುತ್ತಿಲ್ಲ..! ಯಾಕೆಂದರೆ..

ಬೆಂಗಳೂರು: ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಅವರು, ಸಂಘದ ಕಾನೂನು ದೃಢೀಕರಣ ಹಾಗೂ ನೋಂದಣಿ ಕುರಿತ ಪ್ರಶ್ನೆಗೆ ಸ್ಪಷ್ಟನೆ ನೀಡುತ್ತಾ — “ನೋಂದಣಿ ಇಲ್ಲದೆ ಅನೇಕ ವಿಷಯಗಳು ಅಸ್ತಿತ್ವದಲ್ಲಿವೆ. ಹಿಂದೂ ಧರ್ಮವೂ ಸಹ ನೋಂದಾಯಿಸಲ್ಪಟ್ಟಿಲ್ಲ” ಎಂದು ಹೇಳಿದರು.

ಭಾನುವಾರ ಬೆಂಗಳೂರಿನಲ್ಲಿ ನಡೆದ ‘100 ವರ್ಷಗಳ ಸಂಘ ಪ್ರಯಾಣ: ಹೊಸ ದಿಗಂತಗಳು’ ಕಾರ್ಯಕ್ರಮದ ಎರಡನೇ ದಿನದ ಪ್ರಶ್ನೋತ್ತರ ಸತ್ರದಲ್ಲಿ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದರು.“ಈ ಪ್ರಶ್ನೆಗೆ ಹಲವಾರು ಬಾರಿ ಉತ್ತರಿಸಲಾಗಿದೆ. ಕೇಳುವವರು ಪುನಃ ಪುನಃ ಅದನ್ನೇ ಕೇಳುತ್ತಾರೆ. ನಾವು ಪ್ರತೀ ಬಾರಿ ಉತ್ತರಿಸುತ್ತಲೇ ಇದ್ದೇವೆ. ಇದು ಹೊಸ ಪ್ರಶ್ನೆಯೇ ಅಲ್ಲ” ಎಂದು ಭಾಗವತ್ ಹೇಳಿದರು,

“ಆರ್‌ಎಸ್‌ಎಸ್ 1925ರಲ್ಲಿ ಪ್ರಾರಂಭವಾಯಿತು. ನಮ್ಮ ಸರಸಂಘಚಾಲಕರೇ ಹೋರಾಡುತ್ತಿದ್ದ ಆ ಸರ್ಕಾರದೊಡನೆ ನಾವು ನೋಂದಾಯಿಸಿಕೊಂಡಿರುತ್ತೇವೇ? ಸ್ವಾತಂತ್ರ್ಯಾನಂತರ ಕಾನೂನುಗಳು ನೋಂದಣಿಯನ್ನು ಕಡ್ಡಾಯಗೊಳಿಸಲಿಲ್ಲ. ನೋಂದಣಿಯಾಗದ ಸಂಸ್ಥೆಗೂ ಕಾನೂನು ಮಾನ್ಯತೆ ಇದೆ. ನಮ್ಮನ್ನೂ ಅಂತಹ ಸಂಸ್ಥೆಯೆಂದು ಪರಿಗಣಿಸಲಾಗಿದೆ,” ಎಂದರು.


ಇಂಗ್ಲಿಷ್ ಆವೃತ್ತಿಯಲ್ಲೂ ಓದಿ..

‘Even Hindu Dharma is not registered’: Mohan Bhagwat on legal status of RSS

ಆದಾಯ ತೆರಿಗೆ ವಿವಾದದ ಕುರಿತು ಉಲ್ಲೇಖಿಸಿ ಅವರು ಹೇಳಿದರು, “ಒಮ್ಮೆ ಆದಾಯ ತೆರಿಗೆ ಇಲಾಖೆ ನಮಗೆ ತೆರಿಗೆ ಪಾವತಿಸಲು ಸೂಚಿಸಿತ್ತು. ನ್ಯಾಯಾಲಯವು ನಮಗೆ ವ್ಯಕ್ತಿಗಳ ಸಂಘವೆಂದು ತೀರ್ಪು ನೀಡಿತು ಮತ್ತು ನಮ್ಮ ‘ಗುರುದಕ್ಷಿಣೆ’ (ದೇಣಿಗೆ)ಗಳನ್ನು ತೆರಿಗೆಯಿಂದ ವಿನಾಯಿತಿ ನೀಡಿತು.”

‘ಮೂರು ಬಾರಿ ನಮ್ಮ ಸಂಘವನ್ನು ನಿಷೇಧಿಸಲಾಯಿತು. ಅಂದರೆ ಸರ್ಕಾರವೇ ನಮ್ಮ ಅಸ್ತಿತ್ವವನ್ನು ಒಪ್ಪಿಕೊಂಡಿದೆ. ನಾವು ಅಸ್ತಿತ್ವದಲ್ಲಿಲ್ಲದಿದ್ದರೆ, ಯಾರನ್ನು ನಿಷೇಧಿಸಿದರು? ಪ್ರತೀ ಬಾರಿಯೂ ನ್ಯಾಯಾಲಯವು ನಿಷೇಧವನ್ನು ವಜಾಗೊಳಿಸಿ, ಆರ್‌ಎಸ್‌ಎಸ್ ಕಾನೂನುಬದ್ಧ ಸಂಸ್ಥೆಯೇ ಎಂದು ದೃಢಪಡಿಸಿದೆ’ ಎಂದರು.

‘ಅಸೆಂಬ್ಲಿ, ಸಂಸತ್ತಿನಲ್ಲಿ ನಮ್ಮ ಬಗ್ಗೆ ಆಗಾಗ್ಗೆ ಪ್ರಶ್ನೆಗಳನ್ನು ಎತ್ತಲಾಗುತ್ತದೆ. ಪರವಾಗಿ, ವಿರೋಧವಾಗಿ ಅಭಿಪ್ರಾಯಗಳು ಬರುತ್ತವೆ — ಇದು ಮಾನ್ಯತೆಯೇ. ನಾವು ಸಂವಿಧಾನಬಾಹಿರರಲ್ಲ. ಸಂವಿಧಾನದ ಚೌಕಟ್ಟಿನೊಳಗೆ ಕೆಲಸ ಮಾಡುತ್ತೇವೆ. ಆದ್ದರಿಂದ ನೋಂದಣಿಯ ಅಗತ್ಯವೇ ಇಲ್ಲ’ ಎಂದು ಭಗವತ್ ತಿಳಿಸಿದರು. “ನೋಂದಣಿಯಾಗದೆ ಅಸ್ತಿತ್ವದಲ್ಲಿರುವ ಅನೇಕ ಸಂಸ್ಥೆಗಳಿವೆ. ಹಿಂದೂ ಧರ್ಮವೂ ಸಹ ನೋಂದಾಯಿಸಲ್ಪಟ್ಟಿಲ್ಲ” ಎಂದವರು ಟೀಕಾಕಾರರಿಗೆ ತಮ್ಮದೇ ದಾಟಿಯಲ್ಲಿ ಉತ್ತರ ನೀಡಿದ್ದಾರೆ.

ಮುಂದಿನ ಎರಡು ದಶಕಗಳ ಸಂಘದ ದೃಷ್ಟಿಕೋನ ಕುರಿತು ಪ್ರಶ್ನೆಗೆ ಉತ್ತರಿಸುತ್ತಾ, ‘ಧರ್ಮದ ಜ್ಞಾನವನ್ನು ಪ್ರಪಂಚದೊಡನೆ ಹಂಚಿಕೊಳ್ಳಬಲ್ಲ ರಾಷ್ಟ್ರವನ್ನಾಗಿ. ನಾವು ಇಡೀ ಹಿಂದೂ ಸಮಾಜವನ್ನು ಒಗ್ಗೂಡಿಸಿ, ಗುಣಮಟ್ಟ ಮತ್ತು ಶಿಸ್ತಿನ ಮೂಲಕ ಬಲಿಷ್ಠ ಹಾಗೂ ಸಮೃದ್ಧ ಭಾರತವನ್ನು ನಿರ್ಮಿಸಲು ಬಯಸುತ್ತೇವೆ” ಎಂದರು.

“ಈ ಕಾರ್ಯದ ಹೊಣೆ ಇಡೀ ಸಮಾಜದ ಮೇಲಿದೆ. ನಾವು ಹಿಂದೂ ಸಮಾಜವನ್ನು ಆ ಉದ್ದೇಶಕ್ಕೆ ಸಿದ್ಧಗೊಳಿಸುತ್ತಿದ್ದೇವೆ. ಅದು ನಮ್ಮ ಏಕೈಕ ದೃಷ್ಟಿಕೋನ. ಸಂಘಟಿತ, ಶಕ್ತಿಶಾಲಿ ಹಿಂದೂ ಸಮಾಜ ನಿರ್ಮಾಣವೇ ನಮ್ಮ ಧ್ಯೇಯ,” ಎಂದು ಭಾಗವತ್ ಸಾರಿದರು.

Leave a Reply

Your email address will not be published. Required fields are marked *