ಮಂಗಳೂರು: ಕೆಲವು ದಿನಗಳ ಹಿಂದಷ್ಟೇ ಬೆಂಗಳೂರಿನಲ್ಲಿ ‘ರಾಮೋತ್ಸವ’ ನೃತ್ಯ ರೂಪಕ ಮೂಲಕ ದೇಶದ ಗಮನಸೆಳೆದಿರುವ ದಕ್ಷಿಣ ಕನ್ನಡದ ‘ಮೂಡುಬಿದಿರೆ ಬಂಟರ ಸಂಘ’ದ ಪ್ರತಿಭೆಗಳು 2025 ವರ್ಷವನ್ನು ಬೀಳ್ಕೊಟ್ಟ ವೈಖರಿಗೆ ಸಾಮಾಜಿಕ ವಲಯದಲ್ಲಿ ಶಹಬ್ಬಾಸ್ ಗಿರಿ ಸಿಕ್ಕಿದೆ. ‘ಸಾಮಾಜಿಕ ಪಿಡುಗುಗಳನ್ನು ಬಡಿದೋಡಿಸಲು ಯಾರಿಂದಲೂ ಸಾಧ್ಯವಿಲ್ಲ, ಜಾಗೃತಿಯೊಂದೇ ಅದಕ್ಕಿರುವ ಮದ್ದು’ ಎಂಬುದನ್ನು ಕಲಾವಿದರು ವಿಶಿಷ್ಟವಾಗಿ ತೋರಿಸಿಕೊಟ್ಟಿದ್ದಾರೆ.
ನಾಡು 2025ನ್ನು ಮರೆತಿದೆ, 2026ನ್ನು ವಿಜೃಂಭಣೆಯಿಂದ ಸ್ವಾಗತಿಸಿದೆ. ಈ ಪರ್ವಕಾಲದಲ್ಲಿ ಕಹಿ ನೆನಪುಗಳನ್ನು ಮರೆಸುವ, ಹೊಸತನಕ್ಕೆ ಮೌಲ್ಯ ತುಂಬುವ ಪ್ರಯತ್ನವೊಂದು ಮೂಡುಬಿದಿರೆ ಬಂಟರ ಸಂಘ’ದಿಂದ ನಡೆದಿದೆ. ಅದಕ್ಕೆ ವೇದಿಕೆ ಕಲ್ಪಿಸಿಕೊಟ್ಟಿದ್ದು ‘ರಾಷ್ಟ್ರೀಯ ಬಂಟರ ಸಂಘಗಳ ಸಾಂಸ್ಕೃತಿಕ ಸ್ಪರ್ಧೆ’.

ಮಂಗಳೂರು ಹೊರವಲಯದ ಬಜ್ಪೆ ಬಳಿ, ಸ್ಥಳೀಯ ಬಂಟರ ಸಂಘದ ನೇತೃತ್ವದಲ್ಲಿ ನಡೆದ ಈ ಸ್ಪರ್ಧೆಯಲ್ಲಿ ದೇಶದ ವಿವಿಧೆಡೆಯ 9 ಸಾಂಸ್ಕೃತಿಕ ತಂಡಗಳು ಪಾಲ್ಗೊಂಡಿದ್ದವು. ಎಲ್ಲಾ ತಂಡಗಳು ಒಂದಕ್ಕೊಂದು ಸೂಪರ್ ಎಂಬಂತೆ ಅಖಾಡದಲ್ಲಿ ತಮ್ಮ ವೈಭವವನ್ನು ಪ್ರದರ್ಶಿಸಿದವು. ಆ ಪೈಕಿ ಸಾಮಾಜಿಕ ವಲಯದಲ್ಲಿ ಪ್ರಭಾವ ಬೀರಿದ್ದು ಮೂಡಬಿದಿರೆಯ ‘ಮೂಡುಬಿದಿರೆ ಬಂಟರ ಸಂಘ’ದ ಕಲಾವಿದರು.
ಏನಿದು ‘ತಲ್ಲಣ’?
ಆಧುನಿಕ ಯುಗದಲ್ಲಿ ಭಾರತವು ಅಭಿವೃದ್ಧಿಯ ದಿಕ್ಕಿನಲ್ಲಿ ಸಾಗುತ್ತಿದೆ. ಆದರೆ, ಸಾಂಸ್ಕೃತಿಕ ಶ್ರೀಮಂತಿಕೆಯ ಪರಂಪರೆಗೆ ಹೆಸರಾಗಿರುವ ಭರತ ಖಂಡಕ್ಕೆ ಈಗ ಸಾಮಾಜಿಕ ಪಿಡುಗುಗಳೇ ಸವಾಲಾಗಿವೆ. ಈ ಭಾರತವನ್ನು ಹುಚ್ಚರ ಸಂತೆಯಿಂದ ಪಾರು ಮಾಡಬೇಕೆಂಬ ಅನನ್ಯ ಸಂದೇಶವನ್ನು ‘ಮೂಡುಬಿದಿರೆ ಬಂಟರ ಸಂಘ’ದ ಕಲಾವಿದರು ತಮ್ಮ ನೃತ್ಯ ರೂಪಕ ಮೂಲಕ ನಾಡಿನ ಎದುರು ತೆರೆದಿಟ್ಟರು. ಈ ಅಂದ ಚಂದದ ರೂಪಕಕ್ಕೆ ಆಕರ್ಷಣೆಯ ರೂಪ ಕೊಟ್ಟವರೇ ಕೊರಿಯಾಗ್ರಾಫರ್’ಗಳಾದ ಅನೀಶ್ ಪೂಜಾರಿ ಮತ್ತು ಸ್ಮಿತೇಶ್ ಬಾರ್ಯ.

ಮಾತೃ ದೇವೋಭವ, ಪಿತೃ ದೇವೋಭವ ಎಂದು ಪಠಿಸುತ್ತಿರುವುದು ಒಂದೆಡೆಯಾದರೆ, ತಂದೆ ತಾಯಂದಿರನ್ನು ವೃದ್ದಾಶ್ರಮಕ್ಕೆ ಬಿಡುವ ಮನಸ್ಥಿತಿ ಹಲವರಲ್ಲಿದೆ. ತಾಯಿಯ ಮೇಲಿನ ಪ್ರೀತಿ ಕಡಿಮೆಯಾಗಿದೆಯೋ? ಅಥವಾ ತಾಯಿ ಮಮತೆಯಲ್ಲಿ ಕೊರತೆ ಇದೆಯೋ ಗೊತ್ತಿಲ್ಲ. ವೃದ್ದಾಶ್ರಮ ಪರಂಪರೆಯಂತೂ ಬಲಗೊಳ್ಳುತ್ತಿದೆ. ಈ ಪರಿಸ್ಥಿತಿಯನ್ನು ತೋರಿಸುವ ‘ಹುಚ್ಚರ ಸಂತೆ’ ಸಮಾಜಕ್ಕೊಂದು ಉತ್ತಮ ಸಂದೇಶ ನೀಡಿದ ವೈಖರಿ ಗಮನಾರ್ಹ.
ಜಾತಿ ಮತ, ಕೋಮು ಸಂಘರ್ಷಗಳು ನಮ್ಮ ದೇಶವನ್ನು ಅಧೋಗತಿಗೆ ಕೊಡೊಯ್ಯುತಿದೆ ಎಂಬ ಕಳವಳಕಾರಿ ಬೆಳವಣಿಗೆಯತ್ತಲೂ ಈ ಕಲಾವಿದರು ತಮ್ಮದೇ ಬೊಟ್ಟು ಮಾಡಿದರು.

‘ಎಲ್ಲಿ ನಾರಿಯನ್ನು ಪೂಜಿಸುತ್ತಾರೋ ಅಲ್ಲಿ ದೇವತೆಗಳಿರುತ್ತಾರೆ ಎಂಬುದು ನಾಣ್ಣುಡಿ ಇಂತಹಾ ನಂಬಿಕೆಗಳಿಗೆ ಆಸಿಡ್ ದಾಳಿಗಳಂತಹಾ ದೌರ್ಜನ್ಯಗಳು ಅಪವಾದಗಳಾಗುತ್ತವೆ. ಹಾಗಾದರೆ ಮಾನಸಿಕವಾಗಿ ನೊಂದವರು ಹುಚ್ಚರೊ? ಅಥವಾ ಕ್ರೌರ್ಯ ಪ್ರದರ್ಶಿಸುವವರು ಹುಚ್ಚರೊ? ಎಂಬ ಮಾರ್ಮಿಕ ಪ್ರಶ್ನೆಯನ್ನು ಈ ಕಲಾವಿದರು ಡ್ರಾಮಾ ಮೂಲಕ ಸಮಾಜದ ಮುಂದಿಟ್ಟಿದ್ದಾರೆ.
ಸಮಾಜದಲ್ಲಿ ಭ್ರಷ್ಟಾಚಾರ ಎಲ್ಲೆ ಮೀರಿದೆ, ಡ್ರಗ್ಸ್ ಪಿಡುಗು ಯುವಜನರ ಹಾದಿ ತಪ್ಪಿಸಿದೆ. ನಮ್ಮಲ್ಲಿನ ಅವಾಂತರಗಳು ಒಂದೋ ಎರಡೂ? ಇಲ್ಲಿ ಮನೋವೈಕಲ್ಯಕ್ಕೆ ಮದ್ದು ಇದೆ. ಆದರೆ, ಸಾಮಾಜಿಕ ಪಿಡುಗುಗಣ್ಣು ಉತ್ತೇಜಿಸುವ ಅವಾಂತರಕ್ಕೆ ಯಾವ ಮದ್ದು ಇದೆ? ಎಂಬುದನ್ನು ತೋರಿಸುವ ಪ್ರಯತ್ನ ‘ತಲ್ಲಣ’ ಮೂಲಕ ನಡೆದಿದೆ.

ಈ ‘ ಪಾಲ್ಟಾಟೆಡ್ ಬಂಟೆರೆ ಪರ್ಬ 2025’ದಲ್ಲಿ 9 ದಿಗ್ಗಜ ಸಂಘಗಳ ಕಲಾ ತಂಡಗಳು ವಿವಿಧ ಪ್ರದರ್ಶನಗಳನ್ನು ನಾಡಿನ ಜನರೆದುರು ತಮ್ಮ ಸಾಂಘಿಕ ಪ್ರಾವೀಣ್ಯವನ್ನು ಪ್ರದರ್ಶಿಸಿತು. ಈ ಪೈಕಿ ಮೂಡುಬಿದಿರೆ ಬಂಟರ ಸಂಘ ಪ್ರಥಮ ಸ್ಥಾನ ಪಡೆದು ಟ್ರೋಫಿ ಹಾಗೂ ನಗದು ಒಂದು ಲಕ್ಷ ರೂ. ಬಹುಮಾನ ಗೆದ್ದಿದೆ. ದ್ವಿತೀಯ ಸ್ಥಾನ ಕಾರ್ಕಳ ಬಂಟರ ಸಂಘ ಗೆದ್ದಿದೆ. ಮೂರನೇ ಸ್ಥಾನವನ್ನು ಬಂಟ್ವಾಳ ಬಂಟರ ಸಂಘ ಗೆದ್ದಿದೆ. ನಾಲ್ಕನೇ ಸ್ಥಾನವನ್ನು ಉಳ್ಳಾಲ ಬಂಟರ ಸಂಘ ದ ಪಾಲಾಗಿದೆ. ವೈಯಕ್ತಿಕ ಸ್ಪರ್ಧೆಯಲ್ಲಿ ಉತ್ತಮ ಸಂದೇಶ ಸಾರುವ ತಂಡವಾಗಿ ಮೂಡುಬಿದಿರೆ ಬಂಟರ ಸಂಘ ಗುರುತಾಯಿತು. ಉತ್ತಮ ನಿರೂಪಕಿಯಾಗಿ ಸುರತ್ಕಲ್ ಬಂಟರ ಸಂಘದ ರಾಜೇಶ್ವರೀ ಶೆಟ್ಟಿ, ಉತ್ತಮ ಸಮೂಹ ನೃತ್ಯಕ್ಕೆ ಬಂಟ್ವಾಳ ಬಂಟರ ಸಂಘ ಪಾತ್ರವಾಯಿತು. ಮುಂಬಯಿಯ ಥಾಣೆ ಬಂಟರ ಸಂಘವು ಉತ್ತಮ ಶಿಸ್ತಿನ ತಂಡ ಪ್ರಶಸ್ತಿಗೆ ಆಯ್ಕೆಯಾಯಿತು.
65 ಮಂದಿಗೆ ಸುಮಾರು ಒಂದು ತಿಂಗಳ ಕಾಲ ತರಬೇತಿ ನೀಡಿ ಅದ್ಭುತ ಕಲಾವಿದರನ್ನಾಗಿಸಿದ ಕೀರ್ತಿಯೂ ಈ ಕಲಾಶ್ರೇಷ್ಠರದ್ದು. ಕಲಾವಿದರ ಅವಿರತ ಶ್ರಮ, ಶ್ರದ್ಧೆ, ಆತ್ಮ ವಿಶ್ವಾಸ, ಅರ್ಪಣಾ ಮನೋಭಾವ, ಪರಕಾಯ ಪ್ರವೇಶ… ಇಂದು ಬಹುದೊಡ್ಡ ಗೆಲುವು ತಂದುಕೊಟ್ಟಿದೆ ಎಂದು ಕೊರಿಯಾಗ್ರಾಫರ್’ಗಳಾದ ಅನೀಶ್ ಪೂಜಾರಿ ಮತ್ತು ಸ್ಮಿತೇಶ್ ಬಾರ್ಯ. ಈ ರೂಪಕದ ಸಾಹಿತ್ಯ ಕೂಡಾ ಸ್ಮಿತೇಶ್ ಬಾರ್ಯ ಅವರದ್ದು.
ಈ ಗೆಲುವು ಎಂದೂ ಮರೆಯಲಾಗದ್ದು. ಕಲಾ ವೈಭವ ಸ್ಪರ್ಧೆಯಲ್ಲಿ ಬಂಟರ ಸಂಘ ಮೂಡಬಿದಿರೆಗೆ ಪ್ರಥಮ ಸ್ಥಾನ ದೊರಕಿದ್ದು, ಇದಕ್ಕೆ ಸ್ಫೂರ್ತಿಯಾದದ್ದು ವಿವೇಕ್ ಆಳ್ವ. ಮೂಡುಬಿದಿರೆ ಬಂಟರ ಸಂಘದ ಸಾಂಸ್ಕೃತಿಕ ಪ್ರಪಂಚಕ್ಕೆ ಸದಾ ಶಕ್ತಿಯಂತಿರುವ ಡಾ.ಮೋಹನ್ ಆಳ್ವಾರವರು ಈ ಬಾರಿಯೂ ಪ್ರೇರಣೆಯಾದರು ಎಂದು ಮೂಡುಬಿದಿರೆ ಬಂಟರ ಸಂಘ ಮಹಿಳಾ ಘಟಕದ ಅಧ್ಯಕ್ಷರಾದ ಶೋಭಾ ಹೆಗ್ಡೆ ಹಾಗೂ ಅಮೃತಾ ಹೆಗ್ಡೆ ಹೇಳುತ್ತಾರೆ. ಇದೇ ವೇಳೆ, ಪ್ರಶಸ್ತಿ ಗೆದ್ದ ತಂಡಕ್ಕೆ ಮೂಡಬಿದಿರೆ ಬಂಟ್ಸ್ ಸಂಘದ ಅಧ್ಯಕ್ಷರಾದ ತಿಮ್ಮಯಣ್ಣ ಅಭಿನಂದನೆ ಸಲ್ಲಿಸಿದ್ದಾರೆ.






